ವಾತ್ಸ್ಯಾಯನ
	ಸು. 400. ಪ್ರಪಂಚದ ಮೊದಲನೆಯ ಕಾಮಶಾಸ್ತ್ರ ಗ್ರಂಥ ರಚಿಸಿದವ. ಮಲ್ಲನಾಗ ವಾತ್ಸ್ಯಾಯನ ಎಂದೂ ಇವನನ್ನು ಕರೆಯಲಾಗಿದೆ. ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಕಾಮ ನಾಲ್ಕು ಪುರಷಾರ್ಥಗಳಲೊಂದು (ಧರ್ಮ, ಅರ್ಥ ಕಾಮ ಹಾಗೂ ಮೋಕ್ಷ). ಅರ್ಥವನ್ನು ಕುರಿತಂತೆ ಕೌಟಿಲ್ಯ ಗ್ರಂಥ ರಚಿಸಿದಂತೆ ಕಾಮವನ್ನು ಕುರಿತು ಈತ ಶಾಸ್ತ್ರಗ್ರಂಥ ರಚಿಸಿದ್ದಾನೆಂದು ಹೇಳಲಾಗಿದೆ. ಈತನ ಕಾಲದ ಬಗ್ಗೆ, ಇತರ ವಿವರಗಳ ಬಗ್ಗೆ ಖಚಿತ ಮಾಹಿತಿಗಳು ಲಭ್ಯವಿಲ್ಲ. ಈತ ಕೌಟಿಲ್ಯನ ಅರ್ಥಶಾಸ್ತ್ರ ಪ್ರಭಾವವನ್ನು ಕೃತಿಯಲ್ಲಿ ತೋರಿರುವುದರಿಂದ ಕೌಟಿಲ್ಯನ ತರುವಾಯದವನೆಂದೂ ಕಾಳಿದಾಸ, ಶ್ರೀಹರ್ಷ, ಮಯೂರ, ದಂಡಿ, ಮಾಘ, ಭವಭೂತಿ ಮೊದಲಾದವರು ಈತನ ಪ್ರಭಾವಕ್ಕೊಳ ಗಾದ್ದರಿಂದ ಕಾಳಿದಾಸನಿಗಿಂತ ಹಿಂದಿನವನಿರಬೇಕೆಂದೂ ತರ್ಕಿಸಲಾಗಿದೆ. ವರಾಹಮಿಹಿರನ ಬೃಹತ್ ಸಂಹಿತೆ ಗ್ರಂಥದಲ್ಲಿ (6ನೆಯ ಶತಮಾನ) ಹಲವಾರು ಕಾಮಶಾಸ್ತ್ರ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಈ ಕಾರಣಗಳಿಂದ ಈತ ಸುಮಾರು ನಾಲ್ಕನೆಯ ಶತಮಾನದವನಿರ ಬೇಕೆಂದು ಹೇಳಲಾಗಿದೆ.

	ಈತನ ಕಾಮಸೂತ್ರದಲ್ಲಿ ಆನಂದಾನುಭವವೇ ಮೋಕ್ಷ ಸಾಧನವಾಗಿದ್ದು, ಇದಕ್ಕೆ ದೈಹಿಕಾನುಭೂತಿಯ ಅನುಭವಬೇಕೆಂದು ಪ್ರತಿಪಾದಿಸಿದ್ದಾನೆ. ಯುವ ವಧೂವರರ ವೈವಾಹಿಕ ಬದುಕು ಅಸಾಫಲ್ಯದಿಂದ ಕೂಡಿರ ಬಾರದೆಂಬ ಸಾಮಾಜಿಕ ಕಳಕಳಿ ಹಾಗೂ ಪ್ರಜ್ಞೆಗಳಿಂದ ಕಾಮಕಲೆಯ ಶಾಸ್ತ್ರೀಯ ಶಿಕ್ಷಣ ಅವರಿಗೆ ಅಗತ್ಯವೆಂದು ಈತ ಬಹು ಹಿಂದೆಯೇ ಪ್ರತಿಪಾದಿಸಿದ. ಸ್ತ್ರೀ ಪುರಷರ ಮನೋ ದೈಹಿಕ ಸಮಸ್ಯೆಗಳನ್ನು ಮೊದಲು ವಿಶ್ಲೇಷಿಸಿದವನೂ ಈತನೇ. ಈತನ ಪ್ರಭಾವ ಹಲವಾರು ಸಂಸ್ಕøತ ಕವಿಗಳ ಮೇಲಾಯಿತು. ಭವಭೂತಿ ತನ್ನ ಮಾಲತೀಮಾಧವ ನಾಟಕಕ್ಕೆ ವಾತ್ಸ್ಯಾಯನನ ಕಾಮಸೂತ್ರ ಪ್ರಭಾವ ಬೀರಿದೆ ಎಂದು ಹೇಳಿಕೊಂಡಿದ್ದಾನೆ. ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಸಾಮಾಜಿಕ ಜವಾಬ್ದಾರಿಗೆ ಮೇಲ್ಪಂಕ್ತಿ ಹಾಕಿಕೊಟ್ಟವನೆಂಬ ಕಾರಣಕ್ಕೆ ಈತ ಮಹತ್ತ್ವ ಪಡೆದಿದ್ದಾನೆ.

(ನೋಡಿ- ಕಾಮಶಾಸ್ತ್ರ)
(ನೋಡಿ- ಲೈಂಗಿಕವಿಜ್ಞಾನ)						
	(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ